ಮಾನಸಿಕ ಆರೋಗ್ಯದ ಜ್ಞಾನವನ್ನು 21ನೇ ಶತಮಾನದ ಮುಂದಿನ ದಿನಗಳಿಗೆ ಕೊಂಡೈಯುವ ನವೀನ ಸಂಶೋಧನೆಗಳು

 

ಡಾ|| ಸಂಜೀವ ಜೈನ್

ಪ್ರಾಧ್ಯಾಪಕರುಮನೋವೈದ್ಯಕೀಯ ವಿಭಾಗ,

ನಿಮ್ಹಾನ್ಸ್,  ಬೆಂಗಳೂರು

 

(ಕನ್ನಡಕ್ಕೆ ಅನುವಾದ: ಡಾಶ್ರೀನಿವಾಸ ಕಕ್ಕಿಲ್ಲಾಯಮಂಗಳೂರು)

ಕಳೆದೊಂದು ಸಾವಿರ ವರ್ಷಗಳಲ್ಲಿ ಗೆಲಿಲಿಯೋ, ನ್ಯೂಟನ್, ಚಾರ್ಲ್ಸ್ ಡಾರ್ವಿನ್, ಸಿಗ್ಮಂಡ್ ಫ್ರಾಯ್ಡ್ ಅವರಂಥ ಮಹಾನ್ ಚಿಂತಕರು ಮತ್ತು ವಿಜ್ಞಾನಿಗಳು ನಮ್ಮ ಸುತ್ತಲಿನ ಜಗದ ಬಗ್ಗೆ ನಮ್ಮ ಅರಿವನ್ನೇ ಬದಲಿಸಿದರು. ಅದುವರೆಗೂ ನಮ್ಮ ಅರಿವೆಲ್ಲವೂ ಮಾನವ ಕೇಂದ್ರಿತವಾಗಿತ್ತು, ಈ ಬ್ರಹ್ಮಾಂಡದ, ಅದಲ್ಲದಿದ್ದರೂ ಜೈವಿಕ ಪ್ರಪಂಚದ ಬಗೆಗಿನ ಕಲ್ಪನೆಗಳೆಲ್ಲವೂ ಮನುಷ್ಯನ ಸುತ್ತಲೇ ಇದ್ದವು. ಫ್ರಾಯ್ಡ್ ಮತ್ತಿತರ ವಿಜ್ಞಾನಿಗಳು ಅಂತಹಾ ಕಲ್ಪನೆಗಳನ್ನೆಲ್ಲ ಪ್ರಶ್ನಿಸಿ, ಈ ಜಗತ್ತು ಬಹಳಷ್ಟು ಸಂಕೀರ್ಣವಾದದ್ದೆಂದು ಮನಗಾಣಿಸಿ, ಮನುಷ್ಯನ ಗತಿಯಾಗಲೀ, ರೋಗರುಜಿನಗಳಾಗಲೀ ಕೇವಲ ಆಕಸ್ಮಿಕವಾಗಿ ಘಟಿಸುವಂಥವೆಂದು ತೋರಿಸಿಕೊಟ್ಟರು. ವೈಜ್ಞಾನಿಕ ಕ್ರಾಂತಿಯ ಪರಿಣಾಮವಾಗಿ, ಮನುಷ್ಯನ ಆರೋಗ್ಯವಾಗಲೀ, ರೋಗಗಳಾಗಲೀ ಎಲ್ಲವೂ ಜೈವಿಕ ಪ್ರಕ್ರಿಯೆಗಳಿಂದಲೇ ಘಟಿಸುತ್ತವಲ್ಲದೆ ಯಾವುದೇ ದೈವಿಕ ಕಾರಣಗಳಿಂದಲ್ಲ ಎನ್ನುವುದು ಸ್ಪಷ್ಟವಾಗತೊಡಗಿತು. ಇಪ್ಪತ್ತನೇ ಶತಮಾನದಲ್ಲಿ ನಮ್ಮ ವಂಶವಾಹಿಗಳ ರಹಸ್ಯವು ಬಯಲಾಗಿ, 2003ರ ವೇಳೆಗೆ ಮಾನವ ವಂಶವಾಹಿಗಳ ಅಧ್ಯಯನವು ಪೂರ್ಣಗೊಂಡಂತೆ ರೋಗಗಳ ರಹಸ್ಯಗಳೆಲ್ಲವೂ ಸುಲಭವಾಗಿ ದಕ್ಕಬಲ್ಲದೆಂದೂ, ಎಲ್ಲಾ ರೋಗಗಳನ್ನು ಗುಣ ಪಡೀಸಬಲ್ಲ ಸಾಧನಗಳೂ ದೊರೆಯಬಲ್ಲವೆಂದೂ ಅಪಾರ ನಿರೀಕ್ಷೆಗಳು ಹುಟ್ಟಿದ್ದವು. ಎಲ್ಲವೂ ಇನ್ನೇನು ನಮ್ಮ ಕೈಯೊಳಗಾದವು ಎಂದು ಸಂಭ್ರಮಿಸುತ್ತಿದ್ದಂತೆಯೇ, ಎರಡು ದಶಕಗಳಾಗುತ್ತಾ ಬಂದರೂ ಅವು ಇನ್ನೂ ದೂರವೇ ಉಳಿದಿವೆ.

ಅನ್ಯ ಹಲವು ಸಮಸ್ಯೆಗಳಂತೆ ಮನೋರೋಗಗಳು ಕೂಡ ಕೌಟುಂಬಿಕವಾಗಿರಬಹುದೆನ್ನುವುದನ್ನು ಪ್ರಾಚೀನ ಕಾಲದಿಂದಲೂ ಗುರುತಿಸಲಾಗಿತ್ತು. ಇದರ ಸಾಧ್ಯತೆಗಳನ್ನೂ, ವಿಧಾನಗಳನ್ನೂ ಅರಿತುಕೊಳ್ಳುವುದಕ್ಕೆ ಆಧುನಿಕ ವಿಜ್ಞಾನದಿಂದ ಸಾಧ್ಯವಾಗಬೇಕು, ಸಾಧ್ಯವಿದೆ. ಆದರೆ ಈ ಕೆಲಸವೂ ಕೂಡ ನಮ್ಮ ನಿರೀಕ್ಷೆಗಳೆಲ್ಲವನ್ನೂ ಮೀರಿ ಹೆಚ್ಚು ಕಠಿಣವೆನಿಸತೊಡಗಿದೆ. ಭೌತಿಕ ಜಗತನ್ನು ಹುಡುಕಿ ಅರಿಯುವಲ್ಲಿ ಭೂಪಟಗಳೋ, ಧಾತುಗಳ ಕೋಷ್ಠಕಗಳೋ ನಮ್ಮ ನೆರವಿಗೆ ಬರುತ್ತವೆ, ಅವು ಯಾವ ನಿಯಮಗಳನ್ನು ಅನುಸರಿಸುತ್ತವೆನ್ನುವ ಅರಿವು ನಮಗಿರುವುದರಿಂದ, ನಾವು ಆ ನಿಟ್ಟಿನಲ್ಲಿ ಮುಂದುವರಿದಂತೆ ಅವನ್ನು ಇನ್ನಷ್ಟು ಸೂಕ್ಷ್ಮವಾಗಿ ಪರಿಷ್ಕರಿಸುತ್ತಾ ದೂರದ ಅಂತರಿಕ್ಷದಿಂದ ಪರಮಾಣುಗಳೊಳಗಿನ ಲೋಕದೊಳಕ್ಕೂ ಹೋಗಲು ನಮಗೆ ಸಾಧ್ಯವಾಗುತ್ತಿದೆ. ನಮ್ಮ ವಂಶವಾಹಿಗಳ ವಿಷಯದಲ್ಲೂ ಅದು ಸಾಧ್ಯವಿದೆ ಎಂದು ನಾವು ಬಗೆದಿದ್ದೆವು. ಆದರೆ ಈ ವಂಶವಾಹಿಗಳೊಳಗಿರುವ ಕೇವಲ ನಾಲ್ಕು ನೂಕ್ಲಿಯೋಟೈಡ್‌ (ಜಿ, ಸಿ, ಎ ಮತ್ತು ಟಿ) ಗಳು ಕೋಟಿಗಟ್ಟಲೆ ವರ್ಷಗಳಲ್ಲಿ ಅತಿ ವೈವಿಧ್ಯಮಯವಾದ ಜೀವ ರಾಶಿಯನ್ನು ರೂಪಿಸಿದ್ದರ ಹಿಂದೆ ಅಡಗಿರುವ ನಿಯಮಗಳು ನಮಗಿನ್ನೂ ತಿಳಿದಿಲ್ಲ. ರೋಗಿಗಳನ್ನು ಪರೀಕ್ಷಿಸುವ ವೈದ್ಯರಾಗಿ ಓರ್ವ ‘ರೋಗಿ’ಯು ಇತರರಿಗಿಂತ ಹೇಗೆ ಭಿನ್ನವಾಗಿದ್ದಾನೆಂದು ನೋಡುವುದರಲ್ಲಿ ನಾವು ಪಳಗಿದ್ದೇವೆ. ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಇಚ್ಚಿತ್ತದಂತಹ ಮನೋರೋಗಗಳು ಮುಂತಾದ ಸಾಮಾನ್ಯವಾದ,ಸಂಕೀರ್ಣವಾದ ಕಾಯಿಲೆಗಳ ವಿಷಯದಲ್ಲೂ ಇಂತಹಾ ವ್ಯತ್ಯಾಸಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿ ರೋಗದ ನಿರೂಪಣೆ, ಪರಿಮಾಣಾತ್ಮಕ ಭಿನ್ನತೆಗಳು, ನೈಸರ್ಗಿಕ ಆಯ್ಕೆ ಮತ್ತು ವಿಕಾಸ ಇತ್ಯಾದಿಗಳ ಬಗ್ಗೆ ಮೂಲಭೂತ ಪ್ರಶ್ನೆಗಳೂ ಏಳುವಂತಾಗಿದೆ.

ವಂಶವಾಹಿಗಳ ಅಧ್ಯಯನಕ್ಕೆ ಬಳಸಲಾಗುವ ಸರಳವಾದ ಕ್ಯಾರಿಯೋಟೈಪಿಂಗ್ ವಿಧಾನ ಹಾಗೂ ಇನ್ನಷ್ಟು ವಿಷದವಾಗಿ ವಿಂಗಡಿಸುವ ಪರೀಕ್ಷೆ (ಡೀಪ್ ಸೀಕ್ವೆನ್ಸಿಂಗ್) ಗಳು ನಮ್ಮ ವರ್ಣತಂತುಗಳಲ್ಲಿರುವ ಒಂದೊಂದು ವಂಶವಾಹಿಯ ಸ್ಥಾನವೇನೆನ್ನುವುದನ್ನು ಅರಿಯಲು ನಮಗೆ ನೆರವಾಗಿವೆ. ಈ ತಂತ್ರಗಳನ್ನು ಬಳಸಿ ರೋಗಿಗಳು ಮತ್ತು ನಿರೋಗಿಗಳನ್ನು ಹೋಲಿಸಲು ಸಾಧ್ಯವಿದೆ, ಕುಟುಂಬಗಳೊಳಗೆ ಈ ವಂಶವಾಹಿಗಳ ವಿಂಗಡನಾ ಕ್ರಮವನ್ನು ಪರೀಕ್ಷಿಸಲು ಸಾಧ್ಯವಿದೆ, ವಿವಿಧ ಜೀವಜಾತಿಗಳ ನಡುವಿನ ವ್ಯತ್ಯಾಸಗಳನ್ನೂ ಅರಿಯಲು ಸಾಧ್ಯವಿದೆ.

ನಮ್ಮ ವಂಶವಾಹಿಗಳಲ್ಲಿ ಶತಕೋಟಿಗಟ್ಟಲೆ ನ್ಯೂಕ್ಲಿಯೋಟೈಡ್‌ಗಳಿದ್ದು, ಅವುಗಳಲ್ಲಿ ಶೇ.99.99ರಷ್ಟು ಸಾಮ್ಯತೆಗಳಿದ್ದರೂ, ಒಂದಷ್ಟು ಲಕ್ಷ ಬಿಂದುಗಳಲ್ಲಿ ಒಬ್ಬರಿಂದೊಬ್ಬರು ಭಿನ್ನವಾಗಿದ್ದೇವೆ. ಮನೋರೋಗವುಳ್ಳವರು ಮತ್ತು ಇಲ್ಲದಿರುವವರ ನಡುವೆ ಭಿನ್ನವಾಗಿರುವ, ರೋಗಕ್ಕೆ ಕಾರಣವಾಗಿರಬಹುದಾದ, ಹಲವಾರು ಸಾವಿರದಷ್ಟು ವಂಶವಾಹಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಸುಮಾರು 50 ಸಾವಿರ ರೋಗಿಗಳಲ್ಲಿ (ಇಚ್ಚಿತ್ತ, ಇರ್ತುದಿಯ  ಮನೋರೋಗ, ಸ್ವಲೀನತೆಯ ಸಮಸ್ಯೆಗಳು) ನಡೆಸಲಾದ ದೊಡ್ಡ ಮಟ್ಟದ ಅಧ್ಯಯನಗಳಲ್ಲಿ ಅವುಗಳೊಳಗೆ, ಇನ್ನೂ ಇತರ ಸಮಸ್ಯೆಗಳ ನಡುವೆಯೂ, ಸಾಮ್ಯತೆಗಳ ಅಂಶಗಳನ್ನೂ ಗುರುತಿಸಲಾಗಿದೆ. ಆದರೆ ಇವನ್ನು ಯೋರೋಪಿನ ಪ್ರಕರಣಗಳಲ್ಲಷ್ಟೇ ಗುರುತಿಸಲಾಗಿದ್ದು, ಅನ್ಯ ದೇಶಗಳವರನ್ನು ಪರಿಗಣಿಸಿದರೆ ಅಂಥ ವ್ಯತ್ಯಾಸಗಳು ಸಾಕಷ್ಟು ಕಡಿಮೆಯಾಗಿ ಗೋಚರಿಸುತ್ತವೆ. ಕುಟುಂಬಗಳೊಳಗೆ ಇವನ್ನು ಅಧ್ಯಯನ ಮಾಡಿದಾಗಲೂ ಬಹಳಷ್ಟು ವಂಶವಾಹಿಗಳು ಮತ್ತು ಅವುಗಳ ನಡುವಳಿಗಳಲ್ಲಿ ‘ಅಪರೂಪದ’ಭಿನ್ನತೆಗಳು ಕಂಡು ಬರುತ್ತವೆ. ಆದರೆ ಇವು ವಂಶವಾಹಿಗಳಲ್ಲಿ ಸಂಕೇತಗಳಾಗಿರದ ಭಾಗಗಳಲ್ಲೇ ಹೆಚ್ಚಾಗಿ ಕಂಡು ಬರುತ್ತಿದ್ದು, ರೋಗಗಳ ಸಾಧ್ಯತೆಗಳೊಂದಿಗೆ ಸ್ವಲ್ಪ ಮಟ್ಟಿಗಷ್ಟೇ ಸಂಬಂಧಿತವಾಗಿರುತ್ತವೆ. ಇಂತಹಾ ಭಿನ್ನತೆಗಳು ಮಾನಸಿಕ ರೋಗಗಳು ಮತ್ತು ಅವುಗಳ ಲಕ್ಷಣಗಳೊಂದಿಗೆ ಇಷ್ಟೊಂದು ಸೀಮಿತವಾಗಿ ಸಂಬಂಧಿತವಾಗಿರುವುದೇಕೆನ್ನುವುದು ಒಗಟಾಗಿಯೇ ಉಳಿದಿದೆ. ಹೇಗಿದ್ದರೂ, ಇವು ರೋಗವನ್ನುಂಟು ಮಾಡುವ ವಿಧಾನಗಳ ಬಗ್ಗೆ ಸದ್ಯೋಭವಿಷ್ಯದಲ್ಲೇ ಅಧ್ಯಯನಗಳಾಗಬೇಕಾದ ಅಗತ್ಯವಿದೆ.

ಭಾರತದಲ್ಲಿ ಅಪಾರವಾದ ವೈವಿಧ್ಯತೆಯಿರುವುದರಿಂದಲೂ, ಕೇಂದ್ರೀಕೃತ ಆರೋಗ್ಯ ವ್ಯವಸ್ಥೆಯು ಇಲ್ಲದಿರುವುದರಿಂದಲೂ ಇಂತಹಾ ಅಗಾಧ ಗಾತ್ರದ ಮಾಹಿತಿಯನ್ನು ಅಭಿವೃದ್ಧಿ ಪಡಿಸುವುದು ಕಷ್ಟವೇ ಆಗಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರರೋಗ ವಿಜ್ಞಾನ ಸಂಸ್ಥೆಯು (NIMHANS) ಹಲಬಗೆಯ ಮನೋರೋಗಿಗಳಿಗೂ, ಅವರ ಕುಟುಂಬದವರಿಗೂ ಬಹಳ ವರ್ಷಗಳಿಂದ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿದೆ. ಈ ಅಡಿಪಾಯದ ಆಧಾರದಲ್ಲಿ NCBSಮತ್ತು inStemಸಹಯೋಗದೊಂದಿಗೆ ಮಹತ್ವಾಕಾಂಕ್ಷೆಯ ಅಧ್ಯಯನವೊಂದನ್ನು ಪ್ರಾರಂಭಿಸಿದ್ದೇವೆ. ಇಚ್ಚಿತ್ತ, ಇರ್ತುದಿಯ ಮನೋರೋಗ, ಗೀಳು, ಮರೆಗುಳಿ ರೋಗ, ಚಟಗಳು ಮುಂತಾದ ಸಮಸ್ಯೆಗಳುಳ್ಳ ಕುಟುಂಬಗಳನ್ನು ಗುರುತಿಸುವ ಮೂಲಕ ಈ ಅಧ್ಯಯನವನ್ನು ನಡೆಸಲಾಗುತ್ತಿದೆ. ಅಂತಹಾ ಕುಟುಂಬಗಳ ಸದಸ್ಯರನ್ನು ಸವಿವರವಾಗಿ ಪರೀಕ್ಷಿಸುವುದರ ಜೊತೆಗೆ ವಂಶವಾಹಿಗಳ ಅಧ್ಯಯನ ಮತ್ತು ಆಧುನಿಕ ಕಾಂಡ ಕೋಶ ತಂತ್ರಜ್ಞಾನಗಳ ಮೂಲಕ, ಮನೋರೋಗಗಳ ಉಂಟಾಗುವಿಕೆಯಲ್ಲಿ ವಂಶವಾಹಿಗಳು ಮತ್ತು ಜೀವಕಣಗಳಿಗೆ ಸಂಬಂಧಿತ ಅಂಶಗಳನ್ನು ಪತ್ತೆ ಹಚ್ಚುವ ಉದ್ದೇಶವಿದೆ. ಎಂಆರ್‌ಐ (ಮಿದುಳಿನ ರಚನೆ ಮತ್ತು ಕಾರ್ಯಗಳನ್ನು ಪರೀಕ್ಷಿಸುವ ಎರಡು ವಿಧಾನಗಳನ್ನೂ ಬಳಸುವುದು) ಮತ್ತು ಮಿದುಳೊಳಗಿನ ವಿದ್ಯುತ್ ಸಂವಹನದ ಪರೀಕ್ಷೆಗಳನ್ನು ಕೂಡಾ ನಡೆಸಿ, ವಂಶವಾಹಿಗಳು ಮತ್ತು ಜೀವಕಣಗಳ ಕಾರ್ಯಗಳ ಜೊತೆಗೆ ಮಿದುಳು ಮತ್ತು ವರ್ತನೆಗಳ ಸಂಬಂಧಗಳನ್ನು ದೃಢ ಪಡಿಸುವುದಕ್ಕೆ ಇವು ನೆರವಾಗಲಿವೆ.

ಈ ದಿಕ್ಕಿನಲ್ಲಿ ನಮಗೆ ಈಗಾಗಲೇ ಒಂದಷ್ಟು ಯಶಸ್ಸು ಲಭಿಸಿದೆ. ನಿಮ್ಹಾನ್ಸ್‌ನ ವಯೋವೃದ್ಧರ ಚಿಕಿತ್ಸಾಲಯದಲ್ಲಿ ಗುರುತಿಸಲ್ಪಟ್ಟ ‘ಕೌಟುಂಬಿಕ’ ಮರೆಗುಳಿ ರೋಗಕ್ಕೆ ತುತ್ತಾದ ಹಲವಾರು ಕುಟುಂಬಗಳವರನ್ನು ಪರೀಕ್ಷಿಸಿದಾಗ ಅಪೋಲೈಪೋಪ್ರೊಟೀನ್ ಸಾಗಾಣಿಕೆಯಲ್ಲಿ ಭಾಗವಹಿಸುವ ಪ್ರೊಟೀನುಗಳನ್ನು ಸಂಕೇತಿಸುವ ಕೆಲವು ವಂಶವಾಹಿಗಳಲ್ಲಿ ಹಲವು ಅಪರೂಪದ ಭಿನ್ನ ವಿಧಗಳನ್ನು ಗುರುತಿಸಲು ಸಾಧ್ಯವಾಗಿದೆ. ಆ ಮೂಲಕ, ಮರೆಗುಳಿ ರೋಗದಲ್ಲಿ ಈ ನಡುವಳಿಗಿರುವ ಪ್ರಾಮುಖ್ಯತೆಯು ದೃಢಗೊಳ್ಳುವಂತಾಗಿದೆ. ಹಾಗೆಯೇ, ಮೂರಕ್ಕಿಂತ ಹೆಚ್ಚು ಮಂದಿ ಇಚ್ಚಿತ್ತ ವಿಕಲತೆ ಹಾಗೂ ಇರ್ತುದಿಯ ಮನೋರೋಗಗಳನ್ನು ಹೊಂದಿದವರಿದ್ದ 9 ಕುಟುಂಬಗಳ ಸದಸ್ಯರಲ್ಲಿ ಎಕ್ಸೋಮ್ ಕ್ರಮಾನುಗತಿಗಳನ್ನು (ಇವು ವಂಶವಾಹಿಗಳ ಶೇ. 2ರಷ್ಟಿದ್ದರೂ, ಮೂರರಲ್ಲಿ ಒಂದಕ್ಕಿಂತಲೂ ಹೆಚ್ಚು ಅನುವಂಶೀಯ ಕಾಯಿಲೆಗಳಿಗೆ ಕಾರಣವಾಗಿರುತ್ತವೆ) ಪರೀಕ್ಷಿಸಿದಾಗ, ಈ ರೋಗಗಳಿಗೆ ಕಾರಣವಾಗಿರಬಹುದಾದ ಭಿನ್ನತೆಗಳನ್ನು ಗುರುತಿಸುವುದಕ್ಕೆ ಸಾಧ್ಯವಾಗಿತ್ತು. ಇವುಗಳಲ್ಲಿ ಕೆಲವು ಅದಾಗಲೇ ಮನೋರೋಗಗಳೊಂದಿಗೆ ಗುರುತಿಸಲ್ಪಟ್ಟವಾಗಿದ್ದರೆ, ಉಳಿದ ಹಲವು ಭಿನ್ನತೆಗಳು ಇತರ ನರಮಂಡಲ ಬೆಳವಣಿಗೆಯ ಸಮಸ್ಯೆಗಳಿಗೆ ಕಾರಣಗಳೆಂದು ಗುರುತಿಸಲ್ಪಟ್ಟವಾಗಿದ್ದವು. ಮಿದುಳಿನ ಬೆಳವಣಿಗೆ ಮತ್ತು ಪ್ರಬುದ್ಧತೆಯ ಪ್ರಕ್ರಿಯೆಯಲ್ಲಾಗುವ ಸೂಕ್ಷ್ಮವಾದ ಬದಲಾವಣೆಗಳಿಗೆ ಇಂತಹಾ ಭಿನ್ನತೆಗಳು ಸಂಬಂಧಿತವಾಗಿದ್ದು, ಅವು ಮನೋರೋಗಗಳಿಗೆ ಕಾರಣವಾಗುತ್ತವೆಯೇ ಎಂಬುದನ್ನು ಇನ್ನಷ್ಟು ಅಧ್ಯಯನ ಮಾಡಬೇಕಾದ ಅಗತ್ಯವಿದೆ.

ವಂಶವಾಹಿಗಳು ಮತ್ತು ಸುತ್ತಲಿನ ಪರಿಸರಗಳ (ಭೌತಿಕ ಹಾಗೂ ಮನೋಸಾಮಾಜಿಕ) ನಡುವಿನ ಕ್ರಿಯಾತ್ಮಕ ಅಂತರಸಂಬಂಧಗಳನ್ನು ಅರ್ಥೈಸಿಕೊಳ್ಳಲು ವಂಶವಾಹಿಗಳು, ಜೀವಕಣಗಳು ಮತ್ತು ಪ್ರೊಟೀನುಗಳ ನಡುವಿನ ಪ್ರಕ್ರಿಯೆಗಳನ್ನು (ಟ್ರಾನ್ಸ್‌ಸ್ಕ್ರಿಪ್ಟೋಮ್, ಎಪಿಜಿನೋಮ್, ಪ್ರೊಟಿಯೋಮ್) ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಜೀವಕಣಗಳೊಳಗಿನ ಪ್ರಕ್ರಿಯೆಗಳಲ್ಲಾಗುವ ಸೂಕ್ಷ್ಮರೂಪದ ತೊಂದರೆಗಳೇ ಮನೋರೋಗಗಳಿಗೆ ಕಾರಣವಾಗುವ ಸಾಧ್ಯತೆಗಳಿದ್ದು (ಆದ್ದರಿಂದ ಅವನ್ನು ಗುರುತಿಸುವ ಪರೀಕ್ಷಾ ವಿಧಾನಗಳು ದೊರೆಯುವುದು ಕಷ್ಟವಾಗುವುದು) ಅವು ಕಾಲ ಕಳೆದಂತೆ ಕೂಡಿಕೊಂಡು ಮಿದುಳಿನ ಮೇಲೆ ಪರಿಣಾಮ ಬೀರುವಂತಿರಬಹುದು. ಅಂತಹಾ ರೋಗಿಗಳ ಕಾಂಡ ಕೋಶಗಳಿಂದ ಕೃತಕವಾಗಿ ಬೆಳೆಸಿದ ನರಕೋಶಗಳು ಮತ್ತು ಇಅತರ ಸಂಬಂಧಿತ ಅಂಗಾಂಶಗಳು ರೋಗದ  ಮಾದರಿಗಳನ್ನು ರೂಪಿಸಲು ನೆರವಾಗಬಹುದು.

ನಮ್ಮ ಅಧ್ಯಯನಗಳು ಈ ರೋಗಿಗಳನ್ನೂ, ಅವರ ಕುಟುಂಬದವರನ್ನೂ ಹಲವು ವರ್ಷಗಳ ಕಾಲ ಪರಿಶೀಲನೆಯಲ್ಲಿಟ್ಟು ಈ ಎಲ್ಲಾ ಪ್ರಕ್ರಿಯೆಗಳನ್ನು ಇನ್ನಷ್ಟು ಆಳವಾಗಿ ಅರಿಯಲು ಯತ್ನಿಸಲಿವೆ. ಜೊತೆಗೆ, ಅದರಿಂದ ಲಭ್ಯವಾಗುವ ಸಾಧನಗಳೂ, ಮಾಹಿತಿಗಳೂ, ವಿವರಗಳೂ ಕಾಯಿಲೆಯನ್ನು ಆಗಿಂದಾಗ್ಗೆ ಅರ್ಥ ಮಾಡಿಕೊಳ್ಳುವುದಕ್ಕಷ್ಟೇ ಅಲ್ಲ, ಹೊಸ ಬಗೆಯ ಚಿಕಿತ್ಸೆಗಳನ್ನು ರೂಪಿಸುವುದಕ್ಕೂ ನೆರವಾಗಲಿವೆ. ಎಲ್ಲಾ ಒಳ್ಳೆಯ ವೈಜ್ಞಾನಿಕ ಕಾರ್ಯಗಳಲ್ಲಿದ್ದಂತೆ ನಮ್ಮ ದೃಷ್ಟಿಯು ದೂರ ಹರಿದಷ್ಟೂ ಹೊಸ ಹೊಸ ಪ್ರಶ್ನೆಗಳು ಏಳುತ್ತಾ ಹೋಗುತ್ತವೆ. ನಡೆಸಿದ ಪ್ರಯತ್ನಗಳನ್ನು ಇವು ನಿರಾಶಾಜನಕವೆನಿಸುತ್ತವೋ ಅಥವಾ ಚೇತೋಹಾರಿ ಸಾಧನೆಯೆನಿಸುತ್ತವೋ ಎನ್ನುವುದನ್ನು ಅವರವರ ಕಲ್ಪನೆಗೆ ಬಿಡಬಹುದಷ್ಟೇ. ಹೇಗಿದ್ದರೂ ಇಂತಹಾ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು, ಮತ್ತು ಅದನ್ನು ಮುಂದುವರಿಸುವುದಕ್ಕೆ ಮನೋರೋಗ ತಜ್ಞರು ಮತ್ತು ಮಾನಸಿಕ ಆರೋಗ್ಯ ತಜ್ಞರು ಬೆಂಬಲ ನೀಡಬೇಕು ಹಾಗೂ ಸಕ್ರಿಯವಾಗಿ ಭಾಗಿಗಳಾಗಬೇಕು ಎನ್ನುವುದೇ ನಮ್ಮ ಆಶಯವಾಗಿದೆ.